ಮುದ್ದೇಬಿಹಾಳ
ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಮುಖ್ಯ ಪಟ್ಟಣ. ಬಿಜಾಪುರದ ಉಪವಿಭಾಗಕ್ಕೆ ಸೇರಿರುವ ಈ ತಾಲ್ಲೂಕನ್ನು ದಕ್ಷಿಣದಲ್ಲಿ ಹುನಗುಂದ, ಪಶ್ಚಿಮದಲ್ಲಿ ಬಾಗಲಕೋಟೆ ವಾಯವ್ಯದಲ್ಲಿ ಬಸವನ ಬಾಗೇವಾಡಿ, ಉತ್ತರದಲ್ಲಿ ಸಿಂದಗಿ-ಈ ತಾಲ್ಲೂಕುಗಳೂ ಪೂರ್ವದಲ್ಲಿ ರಾಯಚೂರು ಜಿಲ್ಲೆಯ ಸುರಪುರ ಮತ್ತು ಲಿಂಗಸುಗೂರು ತಾಲ್ಲೂಕುಗಳೂ ಸುತ್ತುವರಿದಿವೆ. ನಾಲತವಾಡ, ಮುದ್ದೇಬಿಹಾಳ, ಧವಳಗಿ ಮತ್ತು ತಾಳೀಕೋಟೆ ಹೋಬಳಿಗಳು. ತಾಲ್ಲೂಕಿನಲ್ಲಿ 154 ಗ್ರಾಮಗಳು ಮತ್ತು 2 ಪಟ್ಟಣಗಳು ಇವೆ. ತಾಲ್ಲೂಕಿನ ವಿಸ್ತೀರ್ಣ 1,507 ಚ. ಕಿಮೀ. ಜನಸಂಖ್ಯೆ 184,856 (1981).

	ಈ ತಾಲ್ಲೂಕು ಸುಮಾರು ಮಟ್ಟದ ಪ್ರದೇಶ. ಕೃಷ್ಣಾನದಿ ಈ ತಾಲ್ಲೂಕಿನ ದಕ್ಷಿಣದ ಗಡಿಯಾಗಿ ಬಾಗಲಕೋಟೆ. ಹುನಗುಂದ, ಲಿಂಗಸುಗೂರು ತಾಲ್ಲೂಕುಗಳನ್ನು ಬೇರ್ಪಡಿಸುವಂತೆ ಆಗ್ನೇಯ ಮತ್ತು ಪೂರ್ವಾಭಿಮುಖವಾಗಿ ಹರಿಯುತ್ತದೆ. ತಾಲ್ಲೂಕಿನ ಪಶ್ಚಿಮ ಗಡಿಯಾಗಿ ಹರಿಯುವ ಹಿರೇಹಳ್ಳ ನೈಋತ್ಯಾಭಿಮುಖವಾಗಿ ಸಾಗಿ ಕೃಷ್ಣಾನದಿಯನ್ನು ಸೇರುತ್ತದೆ. ತಾಲ್ಲೂಕಿನ ಈಶಾನ್ಯ ಭಾಗದಲ್ಲಿ ಡೋಣಿನದಿ ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ಸೊಗಲಿ ನದಿ ತಾಲ್ಲೂಕಿನ ಉತ್ತರಭಾಗದಲ್ಲಿ ಪೂರ್ವಾಭಿಮುಖವಾಗಿ ಹರಿದು ದೋಣಿ ನದಿಯನ್ನು ಸೇರುತ್ತದೆ. ಇವಲ್ಲದೆ ಕೆಲವು ಸಣ್ಣ ಹಳ್ಳಗಳೂ ಈ ತಾಲ್ಲೂಕಿನಲ್ಲಿವೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 722 ಮಿಮೀ.

	ಈ ತಾಲ್ಲೂಕಿನಲ್ಲಿ ಕಪ್ಪುಮಣ್ಣಿನ ಪ್ರದೇಶವೇ ಹೆಚ್ಚು. ದೋಣಿ ನದಿಯ ದಡಗಳಲ್ಲಿ ಕೆಲವು ಕಡೆ ಸು. 9 ಮೀ. ಆಳದವರೆಗೂ ಹುಸಿಮಣ್ಣು ಶೇಖರವಾಗಿದೆ. ಇದು ಜನರ, ಪ್ರಾಣಿಗಳ ಪ್ರಾಣಕ್ಕೆ ಕುತ್ತಾಗಿರುವುದೂ ಉಂಟು. ಬಿಜಾಪುರ ಜಿಲ್ಲೆಯ ಇತರ ತಾಲ್ಲೂಕುಗಳಿಗಿಂತ ಈ ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಹೆಚ್ಚು ಭೂಮಿಯನ್ನು ಬಳಸಿಕೊಳ್ಳಲಾಗಿದೆ. 1963-64ರಲ್ಲಿ 136,790 ಹೆಕ್ಟೇರ್ ಪ್ರದೇಶದಲ್ಲಿ ವ್ಯವಸಾಯ ಮಾಡಲಾಗಿತ್ತು. ದೋಣಿನದಿಯಿಂದಾಗಿ ತಾಳೀ ಕೋಟೆ ಪ್ರದೇಶ ಬಹು ಫಲವತ್ತಾಗಿದ್ದು ಸಮೃದ್ಧ ವ್ಯವಸಾಯವಿದೆ. ತಾಲ್ಲೂಕಿನಲ್ಲಿ ನೀರಾವರಿ ವ್ಯವಸಾಯ ಬಹು ಕಡಿಮೆ. 1963-64ರ ಅಂಕೆಅಂಶಗಳ ಪ್ರಕಾರ ಕೆರೆಗಳಿಂದ ಸು. 60 ಹೆಕ್ಟೇರ್ ಬಾವಿಗಳಿಂದ ಸು.670, ಹೆಕ್ಟೇರ್ ಮಾತ್ರ ಬೇಸಾಯಕ್ಕೆ ಒಳಪಟ್ಟಿದ್ದುವು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಈ ತಾಲ್ಲೂಕಿನ ಸಿದ್ಧಾಪುರದಲ್ಲಿ ಒಂದು ಕಟ್ಟೆ ಕಟ್ಟಿ ಅದರ ಎಡನಾಲೆಯಿಂದ 1,13,316 ಹೆಕ್ಟೇರ್ ನೀರೊದಗಿಸಿಕೊಳ್ಳುವ ಹವಣಿಕೆ ಇದೆ.

	ಈ ತಾಲ್ಲೂಕಿನಲ್ಲಿ ಜೋಳ, ಗೋದಿ, ನೆಲಗಡಲೆ, ಸಜ್ಜೆ, ಬತ್ತ, ಹೆಸರು, ತೊಗರಿ, ಅವರೆ ಮುಂತಾದವುಗಳ ಜೊತೆಗೆ ಕಬ್ಬನ್ನು ಬೆಳೆಯುತ್ತಾರೆ. ಪಶುಪಾಲನೆಯೂ ಇದ್ದು ಪಶುಗಳ ರಕ್ಷಣೆಗೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಿ ತಾಲ್ಲೂಕು ಮತ್ತು ಗ್ರಾಮಮಟ್ಟದಲ್ಲಿ ಪಶುವೈದ್ಯಾಲಯಗಳಿವೆ.

	ತಾಲ್ಲೂಕಿನಲ್ಲಿ ಹತ್ತಿ ಎಕ್ಕುವ ಕಾರ್ಖಾನೆಗಳನ್ನು ಬಿಟ್ಟರೆ ಉಳಿದಂತೆ ಕೆಲವು ಗ್ರಾಮೀಣ ಕೈಗಾರಿಕೆಗಳು ಮಾತ್ರ ಇವೆ. ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕು ಮತ್ತು ನಿಯಂತ್ರಿತ ಮಾರುಕಟ್ಟೆಗಳಿವೆ. ಹೂವಿನ ಹಿಪ್ಪರಗಿ-ಮುದ್ದೇಬಿಹಾಳ-ಹುನಗುಂದ ಮಾರ್ಗ ಮುದ್ದೇಬಿಹಾಳ-ತಾಳೀಕೋಟೆ ಮಾರ್ಗ ಹಿಪ್ಪರಗಿ-ತಾಳೀಕೋಟೆ-ಹುಣಸಗಿಮಾರ್ಗ-ಇವು ತಾಲ್ಲೂಕಿನ ಮುಖ್ಯರಸ್ತೆಗಳು. ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ವಿದ್ಯುಚ್ಛಕ್ತಿ. ಶಾಲೆ ಮತ್ತು ಆರೋಗ್ಯ ಕೇಂದ್ರಗಳ ಸೌಕರ್ಯವಿದೆ.

	ತಾಳೀಕೋಟೆ ಈ ತಾಲ್ಲೂಕಿನಲ್ಲಿರುವ ಇತಿಹಾಸಪ್ರಸಿದ್ಧ ಪಟ್ಟಣ. ಮುದ್ದೇಬಿಹಾಳದ ವಾಯವ್ಯದಲ್ಲಿ ಸುಮಾರು 10 ಕಿಮೀ ದೂರದಲ್ಲಿರುವ ಬಾಸರಕೋಡು ಗ್ರಾಮದಲ್ಲಿ ಜಕ್ಕಣಚಾರ್ಯ ನಿರ್ಮಿತವೆಂದು ಹೇಳುವ ಒಂದು ಜೈನ ದೇವಾಲಯವೂ 1750ರಲ್ಲಿ ನಿರ್ಮಿಸಿದ ಮಲ್ಲಿಕಾರ್ಜುನ ಮತ್ತು 1805ರಲ್ಲಿ ಕಟ್ಟಿರುವ ಮೂರುಲಿಂಗ ಗುಡಿಯೂ ಇವೆ. ಮುದ್ದೇಬಿಹಾಳದ ಆಗ್ನೇಯ ದಿಕ್ಕಿನಲ್ಲಿ ಸುಮಾರು 20 ಕಿಮೀ ದೂರದಲ್ಲಿರುವ ನಾಲತವಾಡ ದೊಡ್ಡಗ್ರಾಮ. ಇಲ್ಲಿ ಮೂರು ದೇವಾಲಯಗಳೂ ಒಂದು ಪ್ರೌಢಶಾಲೆಯೂ ಇವೆ. ತಾಳೀಕೋಟೆಯಿಂದ ದಕ್ಷಿಣಕ್ಕೆ 10ಕಿಮೀ ದೂರದಲ್ಲಿರುವ ಶಿವಪುರ ಗ್ರಾಮದ ಹತ್ತಿರ ಹಗರಟಗಿ ತೀರ್ಥವಿದೆ. ಮುದ್ದೇಬಿಹಾಳದ ಪಶ್ಚಿಮಕ್ಕೆ ಸುಮಾರು 20 ಕಿಮೀ ದೂರದಲ್ಲಿ ಕೃಷ್ಣಾನದಿಯ ಎಡ ದಂಡೆಯ ಮೇಲಿರುವ ಯಲಗೂರು ಗ್ರಾಮ ಅಲ್ಲಿಯ ಆಂಜನೇಯ ದೇವಾಲಯದಿಂದ ಪ್ರಸಿದ್ಧವಾಗಿದೆ (ಆಲಮಟ್ಟಿ ರೈಲ್ವೆ ನಿಲ್ದಾಣ ಈ ಗ್ರಾಮದಿಂದ 5 ಕಿಮೀ ದೂರದಲ್ಲಿದೆ).

	ಮುದ್ದೇಬಿಹಾಳ ಈ ತಾಲ್ಲೂಕಿನ ಆಡಳಿತ ಕೇಂದ್ರ ಮತ್ತು ಮುಖ್ಯ ಪಟ್ಟಣ. ಬಿಜಾಪುರದ ಆಗ್ನೇಯಕ್ಕೆ 83ಕಿಮೀ ದೂರದಲ್ಲಿದೆ. ಆಲಮಟ್ಟಿ ರೈಲ್ವೆನಿಲ್ದಾಣದಿಂದ ಇಲ್ಲಿಗೆ 27 ಕಿಮೀ ದೂರ. ಜನಸಂಖ್ಯೆ 14,962 (1981). ಪರ್ವತಗಿರಿ ಮತ್ತು ಮುದ್ದೇಬಿಹಾಳ ಎರಡೂ ಸೇರಿ ಈ ಊರು ಪುರಸಭೆಯಾಗಿದೆ. ಈ ಊರಿನಲ್ಲಿ ಒಂದು ಕಾಲೇಜು. ಮೂರು ಪ್ರೌಢಶಾಲೆಗಳು ಇವೆ. ಆಸ್ಪತ್ರೆ, ತಂತಿ, ದೂರವಾಣಿ ಮತ್ತು ವಿದ್ಯುತ್ತಿನ ಸೌಲಭ್ಯವಿದೆ. ಊರಿನಿಂದ ಹುನಗುಂದ, ಚಿಮ್ಮಲಗಿ ನಾಲತವಾಡ, ತಾಳೀಕೋಟೆ. ಬಸವನ ಬಾಗೇವಾಡಿ ಮೊದಲಾದೆಡೆಗಳಿಗೆ ಉತ್ತಮ ರಸ್ತೆ ಸಂಪರ್ಕವಿದ್ದು ಮುದ್ದೇಬಿಹಾಳ ವ್ಯಾಪಾರಕೇಂದ್ರವಾಗಿ ಬೆಳೆಯುತ್ತಿದೆ. ಈ ಊರಿನಲ್ಲಿ ಒಂದು ಈಶ್ವರದೇವಾಲಯವಿದೆ.

	ಬಾಸರಕೋಡ ನಾಡಗೌಡರ ಪೂರ್ವಜರಾದ ಪರಮಣ್ಣನವರಿಂದ ಈ ಊರು 1680ರಲ್ಲಿ ಸ್ಥಾಪಿತವಾಯಿತು. ಅದೇ ಮನೆತನದ ಹುಚ್ಚಪ್ಪನವರು 1720ರಲ್ಲಿ ಇಲ್ಲಿ ಒಂದು ಕೋಟೆಯನ್ನು ಕಟ್ಟಿಸಿದರು. ಈಗ ಆ ಕೋಟೆಯ ಭಗ್ನಾವಶೇಷಗಳನ್ನು ಕಾಣಬಹುದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ